ಯೂಕ್ಲಿಡ್ 2 - 
ಕ್ರಿ.ಪೂ.ಸು. 300-275. ಗ್ರೀಕ್ ಗಣಿತವಿದ. ಇವನನ್ನು ಜ್ಯಾಮಿತಿಯ ಜನಕ ಎಂದು ಸಂಬೋಧಿಸುವುದುಂಟು. ಈತನ ಜನ್ಮ ವೃತ್ತಾಂತಗಳ ಬಗ್ಗೆ ವಿವರಗಳು ತಿಳಿದಿಲ್ಲವಾದರೂ ಈಜಿಪ್ಟಿನ ದೊರೆ ಒಂದನೆಯ ಟಾಲೆಮಿಯ (ಇವನನ್ನು ಸೋಟರ್ ಎಂದೂ ಕರೆಯಲಾಗಿತ್ತು) ಆಳ್ವಿಕೆಯ ಅವಧಿಯಲ್ಲಿ ಅಲೆಕ್ಸಾಂಡ್ರಿಯದಲ್ಲಿ ಗಣಿತವನ್ನು ಬೋಧಿಸುತ್ತಿದ್ದ. ಅಲೆಕ್ಸಾಂಡ್ರಿಯಾ ಪಟ್ಟಣದಲ್ಲಿ ಸು.600 ವರ್ಷಗಳ ತನಕ ಖ್ಯಾತಿವಂತರಾಗಿದ್ದ ಮುಂಚೂಣಿ ಗಣಿತವಿದರಪೈಕಿ ಯೂಕ್ಲಿಡನೂ ಒಬ್ಬನಾಗಿದ್ದ. ಜ್ಯಾಮಿತಿಯನ್ನು ಕುರಿತಂತೆ ಈತ ರಚಿಸಿದ ದಿ ಎಲಿಮೆಂಟ್ಸ್ ಎಂಬ ಕೃತಿಯೊಂದಿಗೆ ಇವನನ್ನು ಸ್ಮರಿಸಿಕೊಳ್ಳುವುದೇ ರೂಢಿ. ಈ ಕೃತಿ ಸು. 1903ರ ತನಕವೂ ಪಠ್ಯ ಪುಸ್ತಕವಾಗಿತ್ತು. ಇದು 13 ಸಂಪುಟಗಳನ್ನು ಒಳಗೊಂಡಿತ್ತು. ಅರಾಬಿಕ್ ಭಾಷೆಯಲ್ಲಿ ರಚಿತವಾಗಿದ್ದ ಈ ಪುಸ್ತಕಗಳನ್ನು ಮೊತ್ತಮೊದಲಿಗೆ (1482) ಲ್ಯಾಟಿನ್ ಭಾಷೆಗೆ ಅನುವಾದಿಸಲಾಯಿತು. ಮೊದಲ ನಾಲ್ಕು ಸಂಪುಟಗಳಲ್ಲಿ ಸಮತಲ ಜ್ಯಾಮಿತಿಯನ್ನು ಕುರಿತ ಮೂಲಭೂತ ಪ್ರಮೇಯಗಳಿದ್ದುವು. ಅನುಪಾತಗಳನ್ನು ಕುರಿತ ಸಿದ್ಧಾಂತ ಹಾಗೂ ಅನಪವತ್ರ್ಯ ಪರಿಮಾಣಗಳನ್ನು ಕುರಿತ ಪರಿಚಯಗಳು 5 ಮತ್ತು 6ನೆಯ ಸಂಪುಟಗಳಲ್ಲಿದ್ದುವು. ಅಂಕಗಣಿತ ಮತ್ತು ಸಂಖ್ಯಾಸಿದ್ಧಾಂತಗಳನ್ನು ಕುರಿತ ವಿವೇಚನೆಗಳು 7 ಮತ್ತು 9ನೆಯ ಸಂಪುಟಗಳಲ್ಲಿದ್ದುವು. ಜ್ಯಾಮಿತೀಯ ದೃಷ್ಟಿಯಿಂದ ವಿವೇಚಿಸಿದ, ಅಪರಿಮೇಯ ಸಂಖ್ಯೆಗಳ ವರ್ಗೀಕರಣದ ವಿಚಾರ 10ನೆಯ ಸಂಪುಟದಲ್ಲಿದೆ. ಈ ಬಗ್ಗೆ ತಿಯೋಡೋರಸ್ ಮತ್ತು ತಿಯಾಟೀಸಸ್ ಗಣಿತವಿದರು ಪ್ರವರ್ತಿಸಿದ್ದ ವಿಚಾರಗಳ ಬಗ್ಗೆಯೂ ಪ್ರಸ್ತಾವವಿದೆ. 11 ಮತ್ತು 12ನೆಯ ಸಂಪುಟಗಳಲ್ಲಿ ಘನಜ್ಯಾಮಿತಿಗೆ ಸಂಬಂಧಿಸಿದ ಮೂಲಭೂತ ಪ್ರಮೇಯಗಳನ್ನು ನಿರೂಪಿಸಲಾಗಿದೆ. 13ನೆಯ ಸಂಪುಟದಲ್ಲಿ ಐದುಸಮಬಹು ಫಲಕಗಳ ರಚನಾ ವಿಚಾರಗಳನ್ನು ಪ್ರಸ್ತಾವಿಸಲಾಗಿದೆ. ಮಾತ್ರವಲ್ಲದೇ ಬೇರೆ ಯಾವ ಬಹುಫಲಕಗಳೂ ಇಲ್ಲವೆಂದು ಸಾಧಿಸಲಾಗಿದೆ ಕೂಡ. 

ಯೂಕ್ಲಿಡನ ವಿವೇಚನೆಗಳಲ್ಲಿ ವ್ಯಾಖ್ಯೆಗಳು, ಅಭಿಗೃಹೀತಗಳು ಮತ್ತು ಕೆಲವೊಂದು ಸಾಮಾನ್ಯ ಅನಿಸಿಕೆಗಳು ಅಥವಾ ಸ್ವತಃ ಸಿದ್ಧ ಪ್ರಮಾಣಗಳು ಸೇರಿವೆ. ಜ್ಯಾಮಿತಿಯ ರಚನೆಗಳ ವಿಚಾರದಲ್ಲಿ ರೂಲುಪಟ್ಟಿ ಮತ್ತು ಕೈವಾರಗಳನ್ನು ಮಾತ್ರ ಬಳಸುವುದು ಇತ್ತು. ವ್ಯಾಖ್ಯೆಗಳಿಂದ ಉದ್ಭವಿಸುವ ಪ್ರಮೇಯಗಳು ಇಲ್ಲವೇ ತಾರ್ಕಿಕ ನಿಗಮನಗಳನ್ನು ಸಾಮಾನ್ಯ ಶಬ್ದಗಳಲ್ಲಿ ಮೊದಲಿಗೆ ತಿಳಿಯಪಡಿಸುವುದಿತ್ತು. ಅಗತ್ಯವಿದ್ದೆಡೆಗಳಲ್ಲಿ ಪ್ರಮೇಯ ಸಿಂಧುವಾಗಬೇಕಾಗಲು ಇರಬೇಕಾದ ನಿಬಂಧನೆಗಳನ್ನು ಅನಂತರ ನಿರೂಪಿಸಲಾಗುತ್ತಿತ್ತು. ಈ ನಿರೂಪಣೆಯನ್ನು ರೇಖಾ ಚಿತ್ರವೊಂದಕ್ಕೆ ಸಂವಾದಿಯಾಗಿ ಮತ್ತೆ ತಿಳಿಯಪಡಿಸುವುದಿತ್ತು. ಅಂತಿಮವಾಗಿ ಪ್ರಾರಂಭಿಕ ಹೇಳಿಕೆಯನ್ನು ಸಮರ್ಥಿಸುವ ಸಾಧನೆ ಇರುತ್ತಿತ್ತು. ಯೂಕ್ಲಿಡ್ ಕೆಲವೊಮ್ಮೆ ತನ್ನ ವಿವೇಚನೆಗಳಲ್ಲಿ ಅಸಂಗತಿ ಪ್ರದರ್ಶನ ಅಥವಾ ವಾದಾತಿವ್ಯಾಪ್ತಿ (ರಿಡಕ್ಷಿಯೋ ಅ್ಯಡ್ ಆ್ಯಬ್ಸರ್ಡಮ್) ವಿಧಾನವನ್ನು ಬಳಸಿದ್ದನಾದರೂ ಆಧುನಿಕ ಗಣಿತವಿದರು ಇದರ ಸಿಂಧುತ್ವವನ್ನು ಪ್ರಶ್ನಿಸಿರುವುದೂ ಉಂಟು. 
ಯೂಕ್ಲಿಡ್ ಇತರ ಗ್ರಂಥಗಳನ್ನೂ ರಚಿಸಿದ್ದ. ಡಾಟಾ ಎಂಬ ಹೆಸರಿನ ಗ್ರಂಥದಲ್ಲಿ ಆಕೃತಿಗಳನ್ನು ಕುರಿತ ವಿವರಗಳಿವೆ. ಡಿವಿಷನ್ ಆಫ್ ಫಿಗರ್ಸ್ ಎಂಬುದು ಮತ್ತೊಂದು ಗ್ರಂಥ. ಇದರ ಅರಾಬಿಕ್ ಅನುವಾದಗಳ ಕೆಲವೊಂದು ಭಾಗಗಳು ಮಾತ್ರ ಲಭ್ಯ ಇವೆ. ಒಂದು ಆಕೃತಿಯನ್ನು, ಒಂದಕ್ಕೊಂದು ಪೂರ್ವ ನಿರ್ಧಾರಿತ ಸಂಬಂಧಗಳಿರುವಂತೆ, ವಿಭಾಗಿಸುವುದರ ಬಗ್ಗೆ ಈ ಗ್ರಂಥದಲ್ಲಿ ವಿವೇಚಿಸಲಾಗಿದೆ. ಇಂಥವೇ ಮತ್ತೊಂದು ಕೃತಿ ಪೋರಿಸಮ್ಸ್. ಇದು ಲಭ್ಯವಿಲ್ಲ. ಇದರಲ್ಲಿ ವಿರೋಧಾಭಾಸಗಳ ಬಗ್ಗೆ ಹೇಳಿದೆ. ಯೂಕ್ಲಿಡನಿಗೆ ಸಂಗೀತ ಮತ್ತು ದೃಕ್‍ವಿe್ಞÁನಗಳಲ್ಲೂ ಆಸಕ್ತಿ ಇತ್ತು. ಇವನ್ನು ಕುರಿತಂತೆ ಎರಡು ಲಘುಕೃತಿಗಳನ್ನು ಈತ ರಚಿಸಿದ್ದ. ಫಿನಾಮಿನ, ಸೆಕ್ಷನ್ಸ್ ಆಫ್ ದಿ ಸ್ಕೇಲ್ ಇತರ ಕೃತಿಗಳು.
ಗ್ರೀಕ್ ತತ್ತ್ವe್ಞÁನಿ ಪ್ರೋಕ್ಲಸ್ (ಕ್ರಿ.ಶ. ಸು. 411_85) ಎಂಬಾತನ ಹೇಳಿಕೆಯ ಪ್ರಕಾರ ಟಾಲೆಮಿ ದೊರೆ ಯೂಕ್ಲಿಡನನ್ನು ದಿ ಎಲಿಮೆಂಟ್ಸ್ ಗ್ರಂಥ ಓದದೆಯೇ ಜ್ಯಾಮಿತಿಯನ್ನು ಕಲಿಯುವ ಸರಳ ಮಾರ್ಗವಿಲ್ಲವೆ ಎಂದು ಪ್ರಶ್ನಿಸಿದನಂತೆ. ಅದಕ್ಕೆ ಯೂಕ್ಲಿಡ್ ಜ್ಯಾಮಿತಿ ಕಲಿಯಲು ಯಾವುದೇ ರಾಜಮಾರ್ಗ ಇಲ್ಲ ಎಂದು ಉತ್ತರಿಸಿದನಂತೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ